ಮುಡುಕುತೊರೆ
ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುದುಕೊಡಲು ನರಸೀಪುರದಲ್ಲಿರುವ ಒಂದು ಪವಿತ್ರಬೆಟ್ಟ. ಸೋಮಗಿರಿ ಎಂಬ ಹೆಸರೂ ಇದೆ. ಬೆಟ್ಟಕ್ಕೆ ಹೊಂದಿಕೊಂಡಂತೆ ಬೆಟ್ಟಹಳ್ಳಿ ಎಂಬ ಗ್ರಾಮವಿದೆ. ಯಾತ್ರಾಸ್ಥಳ. ತಲಕಾಡಿಗೆ ಉತ್ತರದಲ್ಲಿ ಸುಮಾರು 4 ಕಿಮೀ ದೂರದಲ್ಲಿ ಕಾವೇರಿ ನದಿಯ ಎಡದಂಡೆಯ ಮೇಲೆ, ನದಿ ಇದ್ದಕ್ಕಿದ್ದಂತೆ ತಿರುವು ಪಡೆದುಕೊಳ್ಳುವ ಸ್ಥಳದ ಬಳಿ ಇದೆ. ಬೆಟ್ಟದ ಮೇಲೆ ಮಲ್ಲಿಕಾರ್ಜುನ ದೇವಾಲಯವಿದೆ. ಇಲ್ಲಿಯ ಮಲ್ಲಿಕಾರ್ಜುನ ಲಿಂಗ ತಲಕಾಡಿನ ಪಂಚಲಿಂಗಗಳಲ್ಲೊಂದು. ಈ ದೇವಾಲಯದ ಪ್ರಕಾರದಲ್ಲಿ ಸುಮಾರು 100 ವರ್ಷಕ್ಕೂ ಹಿಂದಿನ ಒಂದು ಮಂಟಪವಿದೆ. ಇದರ ಗೋಡೆಗಳ ಮೇಲೆ ಚಿತ್ರಗಳನ್ನು ಕೆತ್ತಿರುವುದರಿಂದ ಇದನ್ನು ಚಿತ್ರಮಂಟಪವೆಂದೇ ಕರೆಯುತ್ತಾರೆ. ಚಿತ್ರಗಳಲ್ಲಿ ಶಿವಪುರಾಣದ ದೃಶ್ಯಾವಳಿಗಳನ್ನು ಕೆತ್ತಲಾಗಿದೆ. ಪಟ್ಟಿಕೆಗಳ ಮೇಲೆ ಪ್ರತಿಯೊಂದು ಚಿತ್ರದ ಹೆಸರಿನೊಂದಿಗೆ ಒಂದೊಂದು ದೃಶ್ಯವನ್ನೂ ವಿವರಿಸುವ ಕನ್ನಡ ಬರೆಹವಿದೆ.  

ಬೆಟ್ಟದ ಮೇಲೆ ಪ್ರತಿವರ್ಷ ಜನವರಿ-ಫೆಬ್ರುವರಿ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಸುಮಾರು 10,000ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ತಲಕಾಡಿನ ವೈದ್ಯೇಶ್ವರ ದೇವಾಲಯದ ತಾಂಡವೇಶ್ವರ ಪ್ರತಿಮೆಯನ್ನು ಇಲ್ಲಿಗೆ ತಂದಿಡಲಾಗುತ್ತದೆ. ಜಾತ್ರೆಯ ಕೊನೆಯ ದಿನ ಮನರಂಜನೆಗಾಗಿ ಗೂಳಿ ಓಟ ಸ್ಪರ್ಧೆ ಏರ್ಪಡಿಸಲಾಗುವುದು. ಜಾತ್ರೆಗೆ ಬರುವ ಯಾತ್ರಿಕರ ವಸತಿ ಸೌಕರ್ಯಕ್ಕಾಗಿ ಇಲ್ಲಿ ಅನೇಕ ಮಂಟಪಗಳಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ